ಬ್ಯೋಟಲಿಂಕ್, ಆಟೋ ಫಾನ್
	1815-1904. ಜರ್ಮನಿಯ ವಿದ್ವಾಂಸ. ಸಂಸ್ಕøತ ಗ್ರಂಥಗಳ ಬಗ್ಗೆ ಸಂಶೋಧನೆ ನಡೆಸಿದವ. 1815 ಮೇ 30ರಂದು ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ಈಗ ಲೆನಿನ್‍ಗ್ರಾಡ್, ರಷ್ಯ ಜನನ. ಭಾರತೀಯ ಭಾಷಾಶಾಸ್ತ್ರ ಹಾಗೂ ತೌಲನಿಕ ಭಾಷಾಶಾಸ್ತ್ರಕ್ಕೆ ಸಂಬಂಧಿಸಿದ ಈತ ಮಾಡಿರುವ ಕೆಲಸ ಅದ್ವಿತೀಯ. ಸಂಸ್ಕøತದಲ್ಲಿ ಆಳವಾದ ಪಾಂಡಿತ್ಯ ಸಂಪಾದಿಸಿಕೊಂಡಿದ್ದ ಈತ ಪಾಣಿನಿಯ ಬಗ್ಗೆ ಆಕ್ಟ್ ಬ್ಯೂಕರ್ ಗ್ರಮಾಟಿಷರ್ ರೀಗೆಲ್ನ್ ಎಂಬ ಕೃತಿ ಪ್ರಕಟಿಸಿದ 1839-40. ಇದೇ ಗ್ರಂಥ ಪರಿಷ್ಕಾರಗೊಂಡು 47 ವರ್ಷಗಳ ಅನಂತರ 1887 ಪಾಣಿನೀಸ್ ಗ್ರಾಮಾಟಿಕ್ ಮಿಟ್ ವ್ಯೂಬರ್ ಸೆಟ್ಸುಂಗ್ ಎಂಬ ಹೆಸರಿನಲ್ಲಿ ಪ್ರಕಟವಾಯಿತು. ಈಗ ರೂಡಾಲ್ಫ್ ರೂತ್ ಮತ್ತು ಆಲ್ಬ್ರೆಕ್ಟ್‍ವೆಬರ್ ಎಂಬ ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಸುಮಾರು 23 ವರ್ಷಗಳ ಕಾಲ ದುಡಿದು ಸಿದ್ಧಪಡಿಸಿದ ಮಹತ್ತ್ವದ ಕೃತಿ ಸಾಂಸ್ಕ್ರಿಟ್‍ವ್ಯೋರ್ಟರ್ ಬುಕ್ ಎಂಬ ಸಂಸ್ಕøತ ಪದಕೋಶ. ಇದು ಏಳು ಭಾಗಗಳಲ್ಲಿ ಪ್ರಕಟವಾಗಿದೆ. 1853-75. ಕೆಲವು ವರ್ಷಗಳ ಅನಂತರ ಬ್ಯೋಟಲಿಂಕ್ ಈ ಪದಕೋಶದ ಸಂಕ್ಷಿಪ್ತ ಆವೃತ್ತಿಯನ್ನೂ ಏಳು ಭಾಗಗಳಲ್ಲಿ ಪ್ರಕಟಿಸಿದ 1879-89.

	1868ರಿಂದ ಜೇನ ಎಂಬಲ್ಲಿ ನೆಲೆಸಿದ್ದ ಈತ ಏಪ್ರಿಲ್ 1ರಂದು ಲೀಪ್‍ಜಿಗ್‍ನಲ್ಲಿ ನಿಧನಹೊಂದಿದ.
(ಬಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ